ग्रन्थपरिचयः

ವಿದ್ಯಾರತ್ನಾಕರ ದರ್ಶನ

by Vidwan Kambaluru Sudarśanācārya · 2026 · ಕನ್ನಡ

ಕನ್ನಡ

ವಿದ್ಯಾರತ್ನಾಕರ ದರ್ಶನ

by Vidwan Kambaluru Sudarśanācārya

(5.0 · 10000 reviews) In Stock
ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ಸಾಹಿತ್ಯ, ಭಕ್ತಿ ಮತ್ತು ಪಾಂಡಿತ್ಯ ಪರಂಪರೆ

ವಿದ್ಯಾರತ್ನಾಕರ ದರ್ಶನವು ಶ್ರೀವ್ಯಾಸರಾಜಮಠದ ಶ್ರೀಮಂತ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ಸಾಹಿತ್ಯಿಕ, ಆಧ್ಯಾತ್ಮಿಕ, ಭಕ್ತಿಪರ ಹಾಗೂ ಶಾಸ್ತ್ರೀಯ ಕೊಡುಗೆಗಳನ್ನು ಪರಿ…

Pages

200

Language

Kannada

Publisher

Sri Vyasatirtha Samshodhana Prathisthanam

Edition

First

Binding

Perfect Binding

ISBN

978-81-685731-6-1

₹ 150

Inclusive of all taxes

1

About this book

ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ಸಾಹಿತ್ಯ, ಭಕ್ತಿ ಮತ್ತು ಪಾಂಡಿತ್ಯ ಪರಂಪರೆ

ವಿದ್ಯಾರತ್ನಾಕರ ದರ್ಶನವು ಶ್ರೀವ್ಯಾಸರಾಜಮಠದ ಶ್ರೀಮಂತ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ಸಾಹಿತ್ಯಿಕ, ಆಧ್ಯಾತ್ಮಿಕ, ಭಕ್ತಿಪರ ಹಾಗೂ ಶಾಸ್ತ್ರೀಯ ಕೊಡುಗೆಗಳನ್ನು ಪರಿಚಯಿಸುವ ಮಹತ್ವದ ಕೃತಿ.

ಪರಮವಿರಕ್ತರು, ವಿದ್ವನ್ಮಣಿಗಳು ಹಾಗೂ ಉತ್ತಮ ಕವಿಗಳೆಂದು ಪ್ರಸಿದ್ಧರಾದ ಶ್ರೀವಿದ್ಯಾರತ್ನಾಕರತೀರ್ಥರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ಸ್ತೋತ್ರಗಳು, ಕೀರ್ತನೆಗಳು ಹಾಗೂ ಇತರ ಸಾಹಿತ್ಯಕೃತಿಗಳನ್ನು ರಚಿಸಿ ಕನ್ನಡ-ಸಂಸ್ಕೃತ ಸಾಹಿತ್ಯಕ್ಕೂ, ವಿಶೇಷವಾಗಿ ಹರಿದಾಸಸಾಹಿತ್ಯಕ್ಕೂ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ವಿವಿಧ ಛಂದಸ್ಸುಗಳಲ್ಲಿ ಅವರು ರಚಿಸಿರುವ ಕೃತಿಗಳು ಅವರ ಛಂದಃಶಾಸ್ತ್ರದ ಪ್ರಾವೀಣ್ಯಕ್ಕೆ ಸ್ಪಷ್ಟವಾದ ಸಾಕ್ಷಿಯಾಗಿವೆ.

ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳಲ್ಲಿ ಪ್ರತಿಪಾದಿತವಾದ ತತ್ತ್ವವಿಚಾರಗಳನ್ನೇ ತಮ್ಮ ಕೃತಿಗಳಲ್ಲಿ ಶ್ರೀವಿದ್ಯಾರತ್ನಾಕರತೀರ್ಥರು ಸುಂದರವಾಗಿ ಪ್ರತಿಪಾದಿಸಿದ್ದಾರೆ. ಅವರ ‘ರಘುವರಗೀತಾ’ ಕೃತಿಯು ಶ್ರೀಮಧ್ವಾಚಾರ್ಯರ ಮಹಾಭಾರತತಾತ್ಪರ್ಯನಿರ್ಣಯದಲ್ಲಿ ನಿರೂಪಿತವಾಗಿರುವ ಶ್ರೀರಾಮಚಂದ್ರನ ಚರಿತ್ರೆಯನ್ನು ಆಧರಿಸಿದೆ. ಕೇವಲ ಅರ್ಥತಃ ಮಾತ್ರವಲ್ಲದೆ, ಅನೇಕ ಕಡೆ ಶಬ್ದತಃ ಕೂಡ ಶ್ರೀಮದಾಚಾರ್ಯರ ವಚನಗಳನ್ನು ಸಂಗ್ರಹಿಸಿ ನಿರೂಪಿಸಿರುವುದು ಅವರ ಅದ್ಭುತ ಸಂಗ್ರಹಕೌಶಲಕ್ಕೆ ನಿದರ್ಶನವಾಗಿದೆ.

ಅದೇ ರೀತಿ ‘ಸುಮಧ್ವವಿಜಯಸಾರಸಂಗ್ರಹಃ’ ಕೃತಿಯು ಶ್ರೀನಾರಾಯಣಪಂಡಿತಾಚಾರ್ಯರ ಸುಮಧ್ವವಿಜಯದ ಸಾರವನ್ನು ಅತ್ಯಂತ ಸಂಕ್ಷಿಪ್ತವಾಗಿ ಮತ್ತು ಸಮರ್ಥವಾಗಿ ನಿರೂಪಿಸುತ್ತದೆ. ಮೂಲಗ್ರಂಥದ ವಿಚಾರಗಳನ್ನು ಶಬ್ದತಃ ಕೂಡ ಅನುಸರಿಸಿರುವುದು ಅವರ ಶಾಸ್ತ್ರಗ್ರಾಹಕತೆ, ಪಾಂಡಿತ್ಯ ಹಾಗೂ ಸಂಗ್ರಹಸಾಮರ್ಥ್ಯವನ್ನು ಸ್ಪಷ್ಟಪಡಿಸುತ್ತದೆ.

ಅವರ ವಿಶಿಷ್ಟ ಕೃತಿಗಳಲ್ಲಿ ‘ಶ್ರೀವ್ಯಾಸಯತೀಶಚಿತ್ರಚರಿತಮ್’ ಎಂಬ ಅಷ್ಟಕವೂ ಪ್ರಮುಖವಾದುದು. ಇದರಲ್ಲಿ ಶ್ರೀವ್ಯಾಸರಾಜತೀರ್ಥರ ಜೀವನದ ಪ್ರಮುಖ ಘಟನೆಗಳನ್ನು ಸಂಕ್ಷಿಪ್ತವಾಗಿ ನಿರೂಪಿಸುವುದರ ಜೊತೆಗೆ ಅವುಗಳಿಗೆ ಸಂಬಂಧಿಸಿದ ಸಂವತ್ಸರಗಳನ್ನೂ ಸೂಚಿಸಲಾಗಿದೆ. ಇದರಿಂದ ಶ್ರೀವಿದ್ಯಾರತ್ನಾಕರತೀರ್ಥರಿಗೆ ಇತಿಹಾಸದ ವಿಷಯದಲ್ಲಿದ್ದ ನಿಷ್ಕೃಷ್ಟವಾದ ಪರಿಚಯ ಮತ್ತು ಅವರ ಸೂಕ್ಷ್ಮವಾದ ಸಂಶೋಧನಾ ದೃಷ್ಟಿ ವ್ಯಕ್ತವಾಗುತ್ತದೆ. ಮಹಾಪುರುಷರ ಜೀವನಚರಿತ್ರೆಯನ್ನು ಈ ರೀತಿಯಾಗಿ ಸ್ತೋತ್ರರೂಪದಲ್ಲಿ, ಕಾಲಾನುಕ್ರಮದ ವಿವರಗಳೊಂದಿಗೆ ನಿರೂಪಿಸಿರುವ ಕೃತಿ ಅಪರೂಪವೆಂದೇ ಹೇಳಬಹುದು.

ಶ್ರೀವಿದ್ಯಾರತ್ನಾಕರತೀರ್ಥರ ಕನ್ನಡ ಮತ್ತು ಸಂಸ್ಕೃತ ಕೀರ್ತನೆಗಳಲ್ಲಿ ಅವರ ಅನನ್ಯ ಭಕ್ತಿ ಮತ್ತು ಸಂಗೀತಜ್ಞಾನ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅವರ ಕೃತಿಗಳಲ್ಲಿ ಸಂಗೀತಶಾಸ್ತ್ರದ ಆಳವಾದ ಪರಿಚಯವೂ ಗೋಚರಿಸುತ್ತದೆ. ನಾಮಗಿರಿಕ್ಷೇತ್ರದಲ್ಲಿ ನೆಲೆಸಿರುವ ಶ್ರೀನರಸಿಂಹಸ್ವಾಮಿಯವರಲ್ಲಿ ಅವರಿಗೆ ವಿಶೇಷವಾದ ಭಕ್ತಿ ಇದ್ದುದರಿಂದ ‘ನಾಮಗಿರಿ ನರಸಿಂಹ’ ಮತ್ತು ‘ನಾಮಗಿರಿ ನರಹರಿ’ ಎಂಬ ಅಂಕಿತನಾಮಗಳನ್ನು ಅವರು ಸ್ವೀಕರಿಸಿದ್ದರು. ಈ ಅಂಕಿತವನ್ನು ಕೀರ್ತನೆಗಳಲ್ಲಿ ಮಾತ್ರವಲ್ಲದೆ ಕೆಲವು ಸ್ತೋತ್ರಕೃತಿಗಳಲ್ಲಿಯೂ ಬಳಸಿರುವುದು ಗಮನಾರ್ಹವಾಗಿದೆ.

ಈ ಕೃತಿಸಂಕಲನದಲ್ಲಿ ಸುಪ್ರಭಾತಸ್ತೋತ್ರಗಳು, ಆರತಿ ಹಾಡುಗಳು, ಮಂಗಳಪದಗಳು ಹಾಗೂ ನಿತ್ಯಪಾರಾಯಣಕ್ಕೆ ಯೋಗ್ಯವಾದ ಅನೇಕ ಭಕ್ತಿಪರ ಕೃತಿಗಳು ಒಳಗೊಂಡಿವೆ. ಇವು ಭಕ್ತಜನರ ನಿತ್ಯಾನುಷ್ಠಾನಕ್ಕೆ ಉಪಯುಕ್ತವಾಗುವುದರ ಜೊತೆಗೆ, ಸಂಗೀತಜ್ಞರಿಗೆ ಗಾಯನಕ್ಕೆ ಹಾಗೂ ಸಂಶೋಧಕರಿಗೆ ಅಧ್ಯಯನಕ್ಕೆ ಅಮೂಲ್ಯವಾದ ಆಕರಗಳಾಗಿವೆ.

ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ಕೃತಿಗಳು ಈ ಹಿಂದೆ ಶ್ರೀಮಠದಿಂದ ಎರಡು ಬಾರಿ ಪ್ರಕಟವಾಗಿದ್ದವು. ಇದೀಗ ಮೂರನೇ ಬಾರಿಗೆ ಶ್ರೀವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನದ ವತಿಯಿಂದ, ಹೆಚ್ಚಿನ ಶುದ್ಧಪಾಠ, ಪರಿಶೀಲನೆ ಮತ್ತು ಸಂಶೋಧನೆಯೊಂದಿಗೆ ಈ ಕೃತಿಗಳು ಪ್ರಕಟವಾಗುತ್ತಿವೆ. ಇದರೊಂದಿಗೆ ಸಂಸ್ಕೃತ ಸ್ತೋತ್ರಗಳ ಅನುವಾದವನ್ನೂ ನೀಡಲಾಗಿದ್ದು, ಈ ಅಮೂಲ್ಯ ಸಾಹಿತ್ಯಸಂಪತ್ತು ಹೆಚ್ಚಿನ ಸಂಖ್ಯೆಯ ಓದುಗರಿಗೆ ಸುಲಭವಾಗಿ ತಲುಪುವಂತೆ ಮಾಡಲಾಗಿದೆ.

ಈ ಕೃತಿಯನ್ನು ವಿಶೇಷ ಶ್ರಮ ಮತ್ತು ಶ್ರದ್ಧೆಯಿಂದ ಸಿದ್ಧಪಡಿಸಿದವರು ವಿ.॥ ಕಂಬಾಲೂರು ಸುದರ್ಶನಾಚಾರ್ಯರು. ಅವರ ಪರಿಶ್ರಮದಿಂದ ಶ್ರೀವಿದ್ಯಾರತ್ನಾಕರತೀರ್ಥರ ಅಪೂರ್ವ ಸಾಹಿತ್ಯಕೃತಿಗಳು ಸಂಶೋಧಿತ ರೂಪದಲ್ಲಿ ಪುನಃ ಸಹೃದಯರ ಮುಂದಿಡಲ್ಪಡುತ್ತಿವೆ.

ವಿದ್ಯಾರತ್ನಾಕರ ದರ್ಶನವು ಕೇವಲ ಕೃತಿಗಳ ಸಂಗ್ರಹವಲ್ಲ; ಅದು ಶ್ರೀವಿದ್ಯಾರತ್ನಾಕರತೀರ್ಥರ ಭಕ್ತಿ, ಪಾಂಡಿತ್ಯ, ಕಾವ್ಯಪ್ರತಿಭೆ, ಶಾಸ್ತ್ರಜ್ಞಾನ, ಸಂಗೀತಪರಿಜ್ಞಾನ ಮತ್ತು ಶ್ರೀಮಧ್ವಪರಂಪರೆಯ ಮೇಲಿನ ಅಚಲವಾದ ನಿಷ್ಠೆಯ ದರ್ಶನವಾಗಿದೆ. ಈ ಕೃತಿಗಳ ಪಾರಾಯಣ, ಗಾಯನ ಮತ್ತು ಅಧ್ಯಯನದ ಮೂಲಕ ಶ್ರೀವಿದ್ಯಾರತ್ನಾಕರತೀರ್ಥರ ಸಾಹಿತ್ಯ ಪರಂಪರೆ ಇನ್ನಷ್ಟು ವ್ಯಾಪಕವಾಗಿ ಪ್ರಸಿದ್ಧಿ ಪಡೆಯಲಿ ಎಂಬುದೇ ಈ ಪ್ರಕಟಣೆಯ ಆಶಯ.